ಅಲ್ತಾಮೀರ
	ಸ್ಪೇನ್ ದೇಶದ ಉತ್ತರ ಭಾಗದಲ್ಲಿ ಕ್ಯಾಂಟಿಬ್ರಿಯನ್ ಪರ್ವತಶ್ರೇಣಿಯಲ್ಲಿರುವ ಗುಹೆ. ಹಳೆಯ ಶಿಲಾಯುಗದ ಭಿತ್ತಿಚಿತ್ರಗಳಿಗೆ ಪ್ರಸಿದ್ಧವಾಗಿದೆ. ಹೊರಭಾಗದಲ್ಲಿ ಸುಣ್ಣಕಲ್ಲು ಬೆಟ್ಟಗಳಿದ್ದು, ಸುಮಾರು 300 ಗಜಗಳವರೆಗೆ ಒಳಗೆ ಹೋಗಬಹುದಾದ ಈ ಗುಹೆಯಲ್ಲಿರುವ ಮುಖ್ಯ ಚಿತ್ರಗಳೆಲ್ಲವನ್ನೂ ಗುಹೆಯ ಪ್ರಾರಂಭದಿಂದ ಸುಮಾರು 20-30 ಗಜ ದೂರದಲ್ಲೇ ಕಾಣಬಹುದು. ಗೂಳಿ, ಕಾಡುಹಂದಿ, ಕಾಡುಕುದುರೆ, ಕಾಟಿ, ಜಿಂಕೆ ಮುಂತಾದ ಹಲವು ಕಾಡುಮೃಗಗಳ ವರ್ಣರಂಜಿತ ಚಿತ್ರಗಳು ಇಲ್ಲಿಯ ವೈಶಿಷ್ಟ್ಯ. ಶಿಲಾಯುಗದ ಕಾಲಕ್ಕೆ ಸೇರಿದ್ದಾದರೂ ಇಲ್ಲಿಯ ಬಹುಪಾಲು ಚಿತ್ರಗಳು ಹಳೆಯ ಶಿಲಾಯುಗದ ಕೊನೆಯ ಭಾಗದಲ್ಲಿದ್ದ ಮ್ಯಾಗ್ಡಲೇನಿಯನ್ ಸಂಸ್ಕøತಿಗೆ ಸೇರಿದ್ದವು. ಆದಕಾರಣ ಇವು ಸುಮಾರು 12,000 ವರ್ಷಗಳಿಗೂ ಹಳೆಯವೆಂದು ತಿಳಿಯಲಾಗಿದೆ.

(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ